ಬರೆಯಲು ಆಸಕ್ತಿ ಇದೆಯೇ?ಲೇಖಕರಾಗಿ ಆಯ್ರಾ ಸೇರಿಹಾಗು ಹಣ ಗಳಿಸಿ!

ಆಯ್ರಾ ನಲ್ಲಿ ಟ್ರೆಂಡಿಂಗ್


"ಮುತ್ತೈದೆ ಭಾಗ್ಯ"
ಮುತ್ತೈದೆ ಭಾಗ್ಯವೆನ್ನುವದು ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ಬಹಳ ಮಹತ್ವದ ಸ್ಥಾನಪಡೆದಿದೆ. ಮದುವೆ , ಮುಂಜಿವೆ ಮತ್ತು ಯಾವುದೇ ಶುಭ ಕಾರ್ಯಗಳಲ್ಲಿ ಮುತ್ತೈದೆ ಯರನ್ನೇ ಮುಂದೆ ಮಾಡುತ್ತಾರೆ. ಎಲ್ಲದರಲ್ಲೂ ಅವರಿಗೆ ಪ್ರಾಶಸ್ತ್ಯ ಕೊಡುತ್ತಾರೆ. ಇದು ಒಂದು ನಮ್ಮ ಸಂಪ್ರದಾಯ. ಆದರೆ ಹಲವಾರು ಹೆಣ್ಣುಮಕ್ಕಳ ಪತಿಯಾದವನು ಯಾವುದೇ ಒಂದು ಕಾರಣದಿಂದ ಅಸುನೀಗುತ್ತಾನೆ. ಇದರಿಂದ ಪತ್ನಿ ಯಾದವಳು ವೈಧವ್ಯವನ್ನು ಅನುಭವಿಸುವ ಪ್ರಸಂಗ ಬಂದೊದಗುತ್ತದೆ. ಅದರಲ್ಲಿ ಅವಳ ತಪ್ಪೇನಿಲ್ಲದಿದ್ದರೂ ಮುತ್ತೈದೆ ತನದಿಂದ ವಂಚಿತಳಾಗುತ್ತಾಳೆ. ವೈಧವ್ಯದ ಪಟ್ಟ ಕಟ್ಟಿ ಬಿಡುತ್ತಾರೆ. ನಮ್ಮ ಸಂಸ್ಕೃತಿ ಬಹಳ ಶ್ರೀಮಂತವಾಗಿದೆ ಎಂಬ ಹೆಗ್ಗಳಿಕೆ ನಮಗೆಲ್ಲ ಗೊತ್ತಿದೆ .ಆದರೆ ವಿಧವೆಯರ ವಿಷಯದಲ್ಲಿ ಮಾತ್ರ ಇಂತಹ ಆಚರಣೆಗಳು ಬಹಳ ಹೀನಾಯಕರ ಅನ್ನುವಷ್ಟರ ಮಟ್ಟಿಗೆ ಇರುತ್ತದೆ. "ವಿಧವೆ ಅನ್ನುವದಕ್ಕಿಂತ ಮೊದಲು ಅವಳೊಬ್ಬ ಮನುಷ್ಯಳು" ಎಂಬ ಅರಿವಿರಬೇಕು. ಪತಿ ಸತ್ತ ನಂತರ ಅವಳಿಗೆ ಮಾಡುವ ಆಚರಣೆಯಿಂದ ಅವಳ ಮನಸ್ಸಿಗೆ ಎಷ್ಟೊಂದು ಆಘಾತ ವಾಗುತ್ತದೆ, ಎನ್ನುವದು ಯಾರೂ ಯಾಕೆ ಅರ್ಥಮಾಡಿಕೊಳ್ಳದೇ ಇರು ವರು!! ಒಂದು ವೇಳೆ ಅರ್ಥವಾದರೂ ಇವೆಲ್ಲ ಸಂಪ್ರದಾಯಗಳನ್ನು ತೆಗೆದು ಹಾಕಲು ಧೈರ್ಯವಿಲ್ಲದೆ ಮೂಕ ಪ್ರೇಕ್ಷಕರಾಗಿ ನಿಂತುಬಿಟ್ಟಿರುವರೋ ಎನಿಸಿ ದುಃಖವಾಗುತ್ತದೆ. ಇದನ್ನೆಲ್ಲ ನೋಡಿದರೆ , ಹಿಂದಿನದನ್ನು ಬಿಡಲು ಆಗದೆ , ಮುಂದಿನದನ್ನು ಹಿಡಿಯಲು ಆಗದೇ , " ಅಪ್ಪ ನೆಟ್ಟ ಆಲದಮರಕ್ಕೆ ಜೋತು ಬಿದ್ದಂತಾಗಿದೆ " ನಮ್ಮ ಪರಿಸ್ಥಿತಿ. ಪತಿಯನ್ನು ಕಳೆದುಕೊಂಡ ದುಃಖ ಒಂದೆಡೆಯಾದರೆ ಈ ತರಹದ ಗೊಡ್ಡು ಸಂಪ್ರದಾಯಕ್ಕೆ ತನ್ನನ್ನು ಒಪ್ಪಿಸಿಕೊಂಡು , ಒಳಗೊಳಗೆಯೇ ಮಾನಸಿಕ ಹಿಂಸೆ ಅನುಭವಿಸುವುದು. ಸ್ಮಶಾನದಲ್ಲಿಯೇ ಅಂತ್ಯ ಕ್ರಿಯೆಯ ಸಮಯದಲ್ಲಿ ಆ ಹೆಣ್ಣುಮಗಳ ಕುಂಕುಮ , ತಾಳಿ , ಕಾಲುಂಗುರ ತೆಗೆಸುವದು, ಮತ್ತು ಬಳೆಗಳನ್ನು ಒಡೆಯುವದು, ಅದೂ ಯಾರಾದರೂ ಒಬ್ಬ ವಿಧವೆ ಕಡೆಯಿಂದ ಇದನ್ನೆಲ್ಲ ಮಾಡಿಸುವದು. ಅಬ್ಬಾ!! ಎಂತಹ ಅಮಾನವೀಯತೆ ಕೃತ್ಯ ಎನಿಸುವದಿಲ್ಲವೇ!!ಅಷ್ಟು ಮಾಡಿ ಮದುವೆಯಲ್ಲಿ ಯಾಕೆ ಇವೆಲ್ಲಾ ಹಾಕಿಸುತ್ತಾರೋ ಗಂಡನ ಕೈಯಿಂದ...ಅವನು ಸತ್ತ ನಂತರ ಹೆಣ್ಣಿಗೆ ಏನೂ ಅಸ್ತಿತ್ವವೇ ಇಲ್ಲದಂತೆ ಮಾಡಿಬಿಡುತ್ತಾರೆ. ಈ ಕಾರಣಕ್ಕಾಗಿಯೇ ಹೆಣ್ಣುಮಕ್ಕಳು ಮುತ್ತೈದೆ ಸಾವು ಬರಲೆಂದು ಬೇಡಿಕೊಳ್ಳುತ್ತಾರೆ, ಎನಿಸುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡ ನಂತರ ಎಷ್ಟೋ ಹೆಣ್ಣುಮಕ್ಕಳು ಮನೆ ನಡೆಸಿಕೊಂಡು , ಮಕ್ಕಳೆಲ್ಲರ ಪಾಲನೆ ಪೋಷಣೆ ಮಾಡಿ, ದೊಡ್ಡವರನ್ನಾಗಿ ಮಾಡಿ ಅವರನ್ನು ಒಂದು ದಡಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿರುವ ಉದಾಹರಣೆಗಳು ಸಾಕಷ್ಟಿವೆ. ಅವಳು ಇಂತಹವುಗಳನ್ನು ಸಲೀಸಾಗಿ ನಿರ್ವಹಿಸಬಲ್ಲಳು. ತಾನೊಬ್ಬಳೇ ಎಲ್ಲವನ್ನೂ ನಿಭಾಯಿಸಬಲ್ಲಳು. ಆದರೇ ಈ ತರಹದ ಆಚರಣೆಗಳನ್ನು ತಡೆದುಕೊಳ್ಳುವ ಶಕ್ತಿ ಮಾತ್ರ ಅವಳಿಗಿಲ್ಲ.ನಾವಾಗಿಯೇ ವಿಧವೆಯರನ್ನು ಸಮಾಜದಲ್ಲಿ ಎತ್ತಿ ತೋರಿಸುತ್ತಿದ್ದೇವೆ . ಕೊರಳಲ್ಲಿ ತಾಳಿ ಇಲ್ಲದ್ದು ನೋಡಿ ಸಮಾಜದಲ್ಲಿ ಹಲವು ಗಂಡಸರು ಕೆಟ್ಟದೃಷ್ಟಿಯಿಂದ ನೋಡುತ್ತಾರೆ. ಇಂತಹವರ ಸಲುವಾಗಿಯೇ ಇಂದಿನ ಹೆಣ್ಣುಮಕ್ಕಳು ಪತಿ ಸತ್ತ ನಂತರ ಮಂಗಳಸೂತ್ರ ತೆಗೆಯುತ್ತಿಲ್ಲ .. ಹೆಣ್ಣುಮಕ್ಕಳಿಗೆ ಕುಂಕುಮ ,ಹೂವುಗಳು ಬಾಲ್ಯದಿಂದಲೇ ಇರುತ್ತದೆ. ಯಾಕೆ ಅವುಗಳನ್ನು ಬಿಡಬೇಕು ,ಎನ್ನುವ ಧೋರಣೆ ತಪ್ಪೇನಿಲ್ಲ .ಇಂದಿನ ಯುವ ಜನತೆದ ಇಂತಹ ಬದಲಾವಣೆಗಳು ಆಗುತ್ತಲಿವೆ . ಇನ್ನೂ ಆಗಬೇಕಿದೆ. ಮುಪ್ಪಾದ ಮೇಲೆ ಪತಿಯನ್ನು ಕಳೆದುಕೊಂಡರೆ , ಇಂತಹ ಆಚರಣೆಗಳು ಅಷ್ಟಾಗಿ ಮನಸ್ಸಿಗೆ ತಾಕುವದಿಲ್ಲ. ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ಹೆಣ್ಣುಮಕ್ಕಳು ಇದರಿಂದಾಗಿ ಬಹಳ ಮಾನಸಿಕವಾಗಿ ಹಿಂಸೆ ಮತ್ತು ಕೀಳಿರಿಮೆ ಅನುಭವಿಸುತ್ತಾರೆ .. ಯಾವುದೇ ಶುಭ ಕಾರ್ಯಗಳಿಗೆ ಹೋಗಲು ಹಿಂಜರಿಯುತ್ತಾರೆ. ಯಾಕೆಂದರೆ ಅಲ್ಲಿ ಇವರನ್ನು ಏನೋ ಬೇರೆ ತರಹವೇ ನೋಡುವದಲ್ಲದೇ, ಇವರನ್ನೆಲ್ಲ ಬಿಟ್ಟು ಉಳಿದ ಮುತ್ತೈದೆಯರಿಗೆ ಕುಂಕುಮ , ಉಡಿ,ಮತ್ತು ಹೂವು ಇತ್ಯಾದಿ ಕೊಡುತ್ತಾರೆ. ಆದರೂ ಹೆಣ್ಣು ಮಕ್ಕಳು ಇದನ್ನೆಲ್ಲವನ್ನು ಮರೆತು ಅವಮಾನಗಳನ್ನು ಸಹಿಸಿಕೊಂಡು ತಮ್ಮ ಮನೆಯ ಮತ್ತುಮಕ್ಕಳ ಏಳಿಗೆಗೆ ಜೀವವನ್ನೆ ತೇಯುತ್ತಾರೆ. ಮಕ್ಕಳಿಗೆ ತಂದೆ ಇಲ್ಲವೆಂಬ ಕೊರಗನ್ನು ನೀಗಿಸಲು ಸಾಕಷ್ಟು ಶ್ರಮ ಪಡುತ್ತಾರೆ ..ಇಂತಹದರಲ್ಲಿ ಗಂಡಸರಿಗಿಂತ ಹೆಂಗಸರೆ ಸಮರ್ಥನೀಯರು ಎಂದೆನಿಸದಿರಲಾರದು. ಅದೇ ಪತ್ನಿ ಸತ್ತರೆ ಗಂಡಸರಿಗೆ ಇಂತಹ ಆಚರಣೆ ಇಲ್ಲ ..ಏನೂ ಇಲ್ಲ.. ಆದರೆ ಪತ್ನಿಯನ್ನು ಕಳೆದುಕೊಂಡ ಪತಿ ಮಾನಸಿಕ ವಾಗಿ ಸಾಕಷ್ಟು ಕುಗ್ಗುತ್ತಾರೆ . ಇದರಲ್ಲಿ ಎರಡು ಮಾತಿಲ್ಲ .. ಹೆಣ್ಣುಮಕ್ಕಳಷ್ಟು ಗಟ್ಟಿತನ ಅವರಲ್ಲಿರುವದಿಲ್ಲ. “ತಾಯಿ ಸತ್ತರೆ ಮಕ್ಕಳು ಪರದೇಶಿ ಯಾಗುತ್ತಾರೆ”, ಎಂಬ ಗಾದೆ ಮಾತೆೇ ಇದೆ . ಮಕ್ಕಳಿಗೆ ತಂದೆ ಮತ್ತು ತಾಯಿ ಇಬ್ಬರೂ ಬೇಕು. ಇಬ್ಬರಲ್ಲಿ ಒಬ್ಬರು ಇಲ್ಲವಾದರೆ ಸ್ವಲ್ಪ ಕಷ್ಟವೇ. ಆದರೂ ತಾಯಿ ತಂದೆಯ ಸ್ಥಾನವನ್ನು ತುಂಬ ಬಲ್ಲಳು ಎಂದರೆ ತಪ್ಪಾಗಲಾರದು. ಇಷ್ಟೇಲ್ಲ ಕಷ್ಟ ಪಟ್ಟು ಮಕ್ಕಳನ್ನು ಬೆಳೆಸಿ, ಮಕ್ಕಳ ಮದುವೆ ಸಮಯದಲ್ಲಿ ಮತ್ತಿತರ ಶುಭ ಕಾರ್ಯಗಳಲ್ಲಿ, ಪತಿಯನ್ನು ಕಳೆದುಕೊಂಡ ಪತ್ನಿಗೆ, ಪತ್ನಿಯನ್ನು ಕಳೆದುಕೊಂಡ ಪತಿಗೆ, ಭಾಗವಹಿಸಲು ಅವಕಾಶವಿಲ್ಲ. ಎಲ್ಲ ಶಾಸ್ತ್ರ ಗಳನ್ನು ಬೇರೆ ಯವರ ಕಡೆಯಿಂದ ಮಾಡಿಸುವರು. ಎಂತಹ ಶೋಚನೀಯ ಸ್ಥಿತಿ ಎನಿಸುವದಿಲ್ಲವೆ ..!!ಇದರಿಂದ ಮಕ್ಕಳ ಮನಸ್ಸಿಗೂ ನೋವು, ತಂದೆ ತಾಯಿಯರಿಗಂತೂ ಕರುಳು ಕಿವಿಚಿದಂತಹ ಅನುಭವ. ಹಿಂದಿನ ಕಾಲದಲ್ಲಿ ಸತಿಯೊಡನೆ ಸಹಗಮನ ಪದ್ದತಿ ಇತ್ತು . ಪತಿ ಸತ್ತ ನಂತರ ಅವನೊಡನೆ ಸತಿಯೂ ಸಾಯಬೇಕು. ಪತಿಯನ್ನು ಸುಡುತ್ತಿದ್ದ ಬೆಂಕಿಯಲ್ಲಿ ಸತಿಯನ್ನು ಜೀವಂತವಾಗಿ ಸುಡುತ್ತಿದ್ದರು. ಅದು ಮೋಕ್ಷ ಅಂತ ಭಾವಿಸುತ್ತಿದ್ದರು. ಕೆಲವರಲ್ಲಿಯಂತೂ ಗಂಡ ಸತ್ತ ನಂತರ ಹೆಂಡತಿಯ ತಲೆ ಬೋಳಿಸುವದು. ಬಿಳಿಸೀರೆ, ಇಲ್ಲವೇ ಕೆಂಪು ಸೀರೆ ಉಡಬೇಕು. ಆಗಿನ ಕಾಲದಲ್ಲಿ ಬಾಲ್ಯ ವಿವಾಹ ಮಾಡುವ ಪದ್ದತಿ ಇತ್ತು .ಅಂತಹದರಲ್ಲಿ ಪತಿ ಸತ್ತು ಹೋದರೆ ಜೀವನ ಪೂರ್ತಿ ಆ ಹೆಣ್ಣುಮಗು ವಿಧವೆಯಾಗಿ ಸಮಾಜ ವಿಧಿಸಿದ ಕೆಟ್ಟ ಆಚರಣೆಗಳಿಗೆ ತಲೆ ಯೊಡ್ಡಿ ಜೀವನ ಸವೆಸುವದಷ್ಟೇ, ಅವರ ಜೀವನ ಎಂಬಂತಿತ್ತು. 1828 ರಲ್ಲಿ ಭಾರತದ ಗವರ್ನರ್ ಜನರಲ್ ಲಾರ್ಡ್ ವಿಲಿಯಮ್ ಬೆಂಟಿಂಕ್ ಇವರು "ಸತಿ" ಪದ್ಧತಿ ಮತ್ತು ಬಾಲ್ಯ ವಿವಾಹ ದಂತಹ ಕೆಟ್ಟ ಆಚರಣೆಗಳನ್ನು ತೆಗೆದು ಹಾಕಬೇಕೇಂದು ಕಾನೂನು ಜಾರಿಗೊಳಿಸಿದ್ದರು. ಇವರ ಸಹಾಯದಿಂದ ಸಮಾಜ ಸುಧಾರಕ ರಾಜಾರಾಮ್ ಮೋಹನರಾಯ್ ರವರು ಇಂತಹ ಕೆಟ್ಟ ಆಚರಣೆಗಳನ್ನು ನಿರ್ಮೂಲನೆ ಮಾಡಿದರು. ಇಂದಿನ ಕಾಲದಲ್ಲಿಯೂ ಇಂತಹ ಸುಧಾರಣೆ ಇನ್ನೂ ಆಗಬೇಕಿದೆ. ಪರರಾಷ್ಟ್ರಗಳಲ್ಲಿ ಇಂತಹ ಆಚರಣೆಗಳು ಇಲ್ಲ. ಆ ದೇಶಗಳಲ್ಲಿಯ ವ್ಯವಸ್ಥೆ ಇಂತಹ ಗೊಡ್ಡು ಸಂಪ್ರದಾಯಗಳನ್ನು ಬಿಟ್ಟು , ವಿಧವೆಯರು ಸ್ವತಂತ್ರರಾಗಿ ಬದುಕಲು ಏನೇನು ಸಾಧ್ಯತೆಗಳಿವೆ ಅವನ್ನೆಲ್ಲ ಅವರಿಗೆ ಒದಗಿಸುವ ಪ್ರಯತ್ನ ಮಾಡುತ್ತದೆ. ಅವರ ಹಕ್ಕುಗಳನ್ನು ಗೌರವಿಸುತ್ತದೆ. ಅವರೂ ಎಲ್ಲರಂತೆ ಸಮಾನತೆಯಿಂದ ಬದುಕುವ ಅವಕಾಶ ಮಾಡಿಕೊಡುತ್ತದೆ. ಹೀಗಾಗಿ ಅವರಿಗೆ ಕೀಳೀರಿಮೆ ಬರುವ ತರಹ ಯಾವುದೇ ಪರಿಸ್ಥಿತಿ ಬರುವದಿಲ್ಲ. ನಮ್ಮದೇಶದಲ್ಲಿ ವಿದ್ಯಾವಂತರು, ಸಮಾಜ ಸುಧಾರಕರು , ಸಮಾಜದಲ್ಲಿ ಇಂತಹವುಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು.
14 Jun '24
4 ನಿಮಿಷದ ಓದು
ಪಾಲನೆ ಮತ್ತು ಕುಟುಂಬ
"ಮುತ್ತೈದೆ  ಭಾಗ್ಯ"
ಕರೆಂಟ್ ಕಣ್ಣಾಮುಚ್ಚಾಲೆ
ಅರೆ!ಇದೇನು !ನಮ್ಮ ಕ್ರೀಡಾಕ್ಷೇತ್ರಕ್ಕೆ ಹೊಸತಾಗಿ ಸೇರಿದ ಆಟವಾ?ಖಂಡಿತಾ ಅಲ್ಲ..ಹಳ್ಳಿ ಪ್ರದೇಶಗಳ ಸದ್ಯದ ವಿದ್ಯುತ್‌ ನ ಪರಿಸ್ಥಿತಿ.ಅಂದ ಹಾಗೆ ನಾನು ಹೇಳಲು ಹೊರಟದ್ದು ಹಳ್ಳಿಯ ಕರೆಂಟ್ ಅ(ವ್ಯ)ವಸ್ಥೆ ಬಗ್ಗೆ. ಹಳ್ಳಿ ಪ್ರದೇಶಗಳಲ್ಲಿ ದಿನದಲ್ಲಿ ಅಬ್ಬಬ್ಬಾ ಅಂದರೆ 12 ರಿಂದ 14 ಗಂಟೆಗಳ ಕಾಲವಷ್ಟೇ ಕರೆಂಟ್.ಮಳೆಗಾಲದಲ್ಲಿ ಅಷ್ಟೂ ಇಲ್ಲ.ಅದಕ್ಕೇ ಇರಬೇಕು ನಮ್ಮೂರಲೆಲ್ಲ ಕರೆಂಟ್ ನ್ನು "ಅತಿಥಿ "ಎನ್ನುವುದು.ಹಲವು ವರ್ಷಗಳ ಮೊದಲು ಊರಿನ ಕೆಲವು ಮನೆಗಳು ಮಾತ್ರ ಕರೆಂಟ್ ಸೌಕರ್ಯ ಹೊಂದಿದ್ದವು..ವರುಷಗಳು ಕಳೆದಂತೆ ಪ್ರತಿ ಮನೆಗೂ ಕರೆಂಟ್ ಬಂತು.ಟಿವಿ, ಫ್ರಿಟ್ಜ್, ಮಿಕ್ಸಿ,ಗ್ರೈಂಡರ್,ಪಂಪ್ ಸೆಟ್ ಇವೆಲ್ಲವೂ ಜೊತೆಯಾದವು.ಹೀಗೆ ಪ್ರತಿಯೊಂದು ಮನೆಯೂ ಕರೆಂಟ್ ನ್ನು ಅವಲಂಬಿಸುವಂತಾಯಿತು. " ನೀರಲ್ಲಿ ಹುಟ್ಟುವೆ ಕಮಲಮುಖಿಯಲ್ಲ, ತಂತಿಯ ಮೇಲೆ ನಡೆವೆ ಗೆಣೆಗಾತಿಯಲ್ಲ, ಊರೂರು ಸುತ್ತುವೆ ಅಲೆಮಾರಿಯಲ್ಲ, ಮನೆ ಮನೆಯಲಿರುವೆ ನಾನಾರು?" ಹೀಗೆ ಕರೆಂಟ್ ಬಗೆಗೆ ಅಪರೂಪದ ಒಗಟೊಂದಿದೆ."ಅದೆಲ್ಲಾ ಓ.ಕೆ. ಆದರೆ ಈ ಕರೆಂಟ್ ನೆಂಟನಂತೆ ಬಂದು ಹೋಗುವುದು ಯಾಕೆ?" ಎನ್ನುವುದು ನನ್ನ ಪ್ರಶ್ನೆ.ಬೆಳಗ್ಗೆ ಇದ್ದ ಕರೆಂಟ್,ಮಧ್ಯಾಹ್ನ ಕ್ಕಿಲ್ಲ.ಮಧ್ಯಾಹ್ನ ಕ್ಕಿದ್ದರೆ ಸಂಜೆಗಿಲ್ಲ.ಇನ್ನು ರಾತ್ರಿ ಯ ಕಥೆ ಕೇಳುದೇ ಬೇಡ . ನಾಳೆ ಕರೆಂಟಿದ್ದರೆ ಸಾಕಪ್ಪಾ ಅನ್ನುತ್ತಾ ಮರುದಿನ ಕ್ಕೆ ದೋಸೆಗೆಂದು ಅಕ್ಕಿನೆನೆಹಾಕುವುದು,ಬೆಳಗ್ಗೆ ಎದ್ದು ಸ್ವಿಚ್ ಹಾಕಿ ನೋಡಿದ್ರೆ ಕರೆಂಟ್ ನಾಪತ್ತೆ!ಐದು ನಿಮಿಷ ಕಾದದ್ದಾಯಿತು,ಹತ್ತು ನಿಮಿಷ ಕಾದದ್ದಾಯಿತು...ಉಹುಂ ಕರೆಂಟ್ ಬರುವ ಯಾವ ಲಕ್ಷಣಗಳೂ ಇಲ್ಲ.ಇನ್ನು ಹಳೇ ಕಡಿವಕಲ್ಲೇ ಗತಿ ಎಂದು ರುಬ್ಬಲು ಶುರು ಮಾಡಿದ ಐದು ನಿಮಿಷಕ್ಕೆ ಕರೆಂಟ್ ಹಾಜರ್!ಅತ್ತ ಮಿಕ್ಸಿ ಜಾರ್ ಗೆ ಅಕ್ಕಿ ಹಾಕುವುದೂ ಅಲ್ಲ,ಇತ್ತ ಕಡಿವಕಲ್ಲು ತಿರುಗಿಸುವುದೂ ಅಲ್ಲದ ಸಂದಿಗ್ಧ ಪರಿಸ್ಥಿತಿ..ಅಂತೂ ಇಂತೂ ಕರೆಂಟ್ ಸಹಸ್ರ ನಾಮಾರ್ಚನೆಯೊಂದಿಗೆ ದೋಸೆಹಿಟ್ಟು ರೆಡಿ .ಹೇಗಿದ್ದರೂ ಕರೆಂಟ್ ಇದೆಯಲ್ಲ್ವಾ ಎನ್ನುತ್ತಾ ಚಟ್ನಿಗೆಂದು ಕಾಯಿತುರಿದಾಗ ಕರೆಂಟ್ ಮಾಯವಾಗಬೇಕೆ!.ಚಟ್ನಿ ಇಲ್ಲದಿದ್ದರೇನಂತೆ ತುಪ್ಪ,ಸಕ್ಕರೆ ,ಮೊಸರಿನೊಂದಿಗೆ ದೋಸೆ ತಿಂದರಾಯಿತು ಎಂಬ ಸಮಾಧಾನ. ಬೆಳಗ್ಗೆ ಎಲ್ಲಾದರೂ ಗಂಜಿ ಎಂದರೆ ಆ ಮನೆಯಲ್ಲಿ ಕರೆಂಟ್ ಇಲ್ಲವೆಂಬುದು ಒಳಾರ್ಥ!!.ಮಧ್ಯಾಹ್ನ ದವರೆಗೂ ಕರೆಂಟಿಲ್ಲವೆಂದರೆ ಸಾರು ,ಪಲ್ಯವೇ ಗತಿ. ಕರೆಂಟ್ ಹೆಚ್ಚು ಕೈ ಕೊಡುವುದು ತೋಟಕ್ಕೆ ನೀರು ಹಾಕುವ ಸಮಯದಲ್ಲಿ ಯೇ.ದಿನದ ನಿಗದಿತ ಸಮಯದಲ್ಲಿ ಮಾತ್ರ 3 ಫೇಸ್ ಕರೆಂಟ್ . ಪಂಪ್ ಸ್ವಿಚ್ ಆನ್ ಮಾಡಿ ಮನೆ ತಲುಪಿದಾಗ ಕರೆಂಟಿಲ್ಲ ಎಂಬ ಅಶರೀರವಾಣಿ.ಹೀಗೆ ತೋಟ -ಮನೆ ಎಂದು ತಿರುಗಿ ತಿರುಗಿ ಒಂದು ಶಿಫ್ಟ್ ನೀರು ಹಾಕಿದಾಗ ಕೃಷಿಕ ಹೈರಾಣಾಗುವುದರಲ್ಲಿ ಸಂಶಯವಿಲ್ಲ.ಇನ್ನು ಎಲ್ಲಿಯಾದರೂ ಒಂದೆರಡು ದಿನವಿಡೀ ಕರೆಂಟಿಲ್ಲವೆಂದರೆ ಟಾಂಕಿ ಖಾಲಿ! ಮೊಬೈಲ್ ನೋಡನೋಡುತ್ತಲೇ 10%,5%,3% ಅನ್ನುತ್ತಲೇ ಚಾರ್ಜ್ ಖಾಲಿ.ನಂತರ "ನೀವು ಕರೆ ಮಾಡಿದ ಚಂದಾದಾರರು ಸ್ವಿಚ್ ಆಫ್ ಮಾಡಿದ್ದಾರೆ".. ಕರೆಂಟ್ ಹೀಗೆ ಕೈ ಕೊಟ್ಟಾಗಲೇ ನಾವು ಎಷ್ಟರ ಮಟ್ಟಿಗೆ ಅದನ್ನು ಅವಲಂಬಿಸಿದ್ದೇವೆ ಎಂಬುವುದರ ಅರಿವಾಗುವುದಲ್ಲವೇ. ಹಗಲು ಕರೆಂಟ್ ಸರಿ ಇಲ್ಲದಿದ್ದರೇನಂತೆ ರಾತ್ರಿಯಿರಬಹುದು ಎಂಬ ಊಹೆಯೂ ಉಲ್ಟಾ...ಹೆಚ್ಚು ಹೋಮ್ ವರ್ಕು ಇದ್ದಾಗ,ಪರೀಕ್ಷಾ ಸಮಯದಲ್ಲಿ, ಮನೆ ಕಾರ್ಯಕ್ರಮ ಗಳಿದ್ದಾಗ ಕರೆಂಟ್ ಕೂಡ ಬ್ಯುಸಿ...ನಾಪತ್ತೆ!.ಶಾಲಾ ಮಕ್ಕಳಿಗೆ ಚಾರ್ಜರ್ ಲೈಟ್,ಕ್ಯಾಂಡಲ್ ಬೆಳಕಿನಲ್ಲಿ ಓದಿ ಬರೆಯುವ ಪರಿಸ್ಥಿತಿ. ಮನೆಯವರಿಂದ ಮಂಗಳಾರತಿಯಾಗಿ ಅಪರೂಪಕ್ಕೆ ಪುಸ್ತಕ ಬಿಡಿಸಿದಾಗ ಕರೆಂಟ್ ಹೋದರೆ ಮಕ್ಕಳಿಗೆಲ್ಲಾ ಖುಷಿ ಯೋ ಖುಷಿ."ಇನ್ನು ನಾಳೆ ಬೆಳಿಗ್ಗೆ ಬೇಗ ಎದ್ದು ಓದಿದರಾಯಿತು.ಬೇಗ ಊಟ ಮಾಡಿ ಮಲಗು "ಎಂಬ ಮಾತುಗಳನ್ನು ಕೇಳಿದಾಗಲಂತೂ ಸ್ವರ್ಗಕ್ಕೆ ಮೂರೇ ಗೇಣು. ಪರೀಕ್ಷೆಗಳೆಲ್ಲಾ ಮುಗಿದು ಒಂದು ಸಿನಿಮಾ ನೋಡುವ ಎಂದು ಟಿ.ವಿ ಎದುರು ಕುಳಿತರೆ ಅದಕ್ಕೂ ಅಡ್ಡಿಪಡಿಸುತ್ತದೆ ಈ ಕರೆಂಟ್.ಇಷ್ಟದ ಸೀರಿಯಲ್ ಸಮಯದಲ್ಲಿ ಕರೆಂಟ್ ಕಟ್ ಆದರೆ ಕೆಇಬಿ,ಮೆಸ್ಕಾಂ ಹೀಗೆ ಮುಂದುವರಿದು ಮಂತ್ರಿ ಗಳ ವರೆಗೂ ಬೈಗುಳಿನ ಸುರಿಮಳೆ ಶುರು.ಮಳೆಗಾಲ ಗುಡುಗು ,ಸಿಡಿಲು ,ಗಾಳಿ ಮಳೆ ಬಂದರಂತೂ ಕರೆಂಟ್ ಕಥೆ ಹೇಳಬೇಕೆಂದೆನಿಲ್ಲ!. ಅಪರೂಪಕ್ಕೆ ಇಡೀದಿನ ಕರೆಂಟ್ ಇದ್ದರೆ,ಇವತ್ತು ತಪ್ಪಿ ಕರೆಂಟ್ ಕೊಟ್ಟದ್ದಾಗಿರಬಹುದು ಎಂದು ಎಲ್ಲರೂ ಆಡಿಕೊಳ್ಳುವುದುಂಟು.ಕರೆಂಟ್ ಇಲ್ಲದಾಗ ನೆರೆಕರೆ ಮನೆಗಳಿಗೆ ಭೇಟಿ ನೀಡುವ,ಕರಕುಶಲ ಕಲೆಗಳ ಮಾಡುವ ಮನಸಾಗುವುದು. ಕರೆಂಟ್ ಇಲ್ಲದ ರಾತ್ರಿ ಮನೆಮಂದಿಯೆಲ್ಲ ಜಗಲಿಯಲಿ ಕುಳಿತು ಪಟ್ಟಾಂಗ ಹಾಕುವುದು ಮಾಮೂಲು.ಮಕ್ಕಳಿಗೆ ನಕ್ಷತ್ರ ವೀಕ್ಷಣೆಯ ಮಜಾವೂ ಸಿಗುತ್ತದೆ.ಅಂದ ಹಾಗೆ ಕರೆಂಟಿಲ್ಲದಾಗ ಲೇಖನ ಬರೆಯುವ ಮನಸಾಯಿತು.
14 Jun '24
2 ನಿಮಿಷದ ಓದು
ಕರೆಂಟ್ ಕಣ್ಣಾಮುಚ್ಚಾಲೆ
ಗುರು ಹಿರಿಯರ ಭಕ್ತಿ
ನಮ್ಮ ದೇಶದ ಜನರು ತಮ್ಮ ಹೆತ್ತವರು, ಹಿರಿಯರು, ಶಿಕ್ಷಕರು ಮತ್ತು ಉದಾತ್ತ ಆತ್ಮಗಳ ಮುಂದೆ ಅವರ ಪಾದ ಸ್ಪರ್ಶಿಸುವ ಮೂಲಕ ನಮಸ್ಕರಿಸುತ್ತಾರೆ. ಹಿರಿಯರುತಮ್ಮ ಕೈಯನ್ನು ನಮ್ಮ ತಲೆಯ ಮೇಲೆ ಅಥವಾ ನಮ್ಮ ಮೇಲೆ ಇರಿಸುವ ಮೂಲಕ ನಮ್ಮನ್ನು ಆಶೀರ್ವದಿಸುತ್ತಾರೆ. ನಿತ್ಯ ನಾವು ಹಿರಿಯರನ್ನು ಬೇಟಿಯಾಗುವದು , ಹೊಸಕಾರ್ಯಗಳ ಆರಂಭ, ಜನ್ಮದಿನಗಳು, ಹಬ್ಬಗಳು , ಪ್ರಮುಖ ಸಂದರ್ಭಗಳಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಲಾಗುತ್ತದೆ. ಈ ಗೌರವ ನಮ್ಮ ಆತ್ಮವನ್ನು ಪರಿಚಯಿಸಲು ಒಬ್ಬರ ಕುಟುಂಬ ಘೋಷಿಸಲು ಮತ್ತು ಸಾಮಾಜಿಕ ಸ್ಥಾನಮಾನಗಳ ಕುರುಹುಗಳಾಗಿವೆ. ನಾವು ಪಾದಸ್ಪರ್ಶಿಸಿ ನಮಸ್ಕರಿಸುವದು ಹಿರಿಯರು ನಿರೂಪಿಸುವ ವಯಸ್ಸು, ಪ್ರಬುದ್ಧತೆ, ಉದಾತ್ತತೆ ಮತ್ತು ದೈವತ್ವದ, ಗೌರವದ ಸಂಕೇತವಾಗಿದೆ.ಇದು ನಮ್ಮ ಮೇಲಿನ ಹಿರಿಯರ ನಿಸ್ವಾರ್ಥ ಪ್ರೀತಿ, ನಮ್ಮ ಕಲ್ಯಾಣಕ್ಕಾಗಿ ಅವರು ಮಾಡಿದ ತ್ಯಾಗ ಗುರುತಿಸುವದನ್ನು ಸಂಕೇತಿಸುತ್ತದೆ. ಸಂಪ್ರದಾಯವು ಬಲವಾದ ಕುಟುಂಬ ಸಂಬಂಧವನ್ನು ನಿರಂತರ ಪ್ರತಿಬಿಂಬಿಸುತ್ತದೆ. ಕಾಶ್ಮಿಕ್ ಅನ್ನುವ ಶಕ್ತಿಯು ನಮ್ಮ ದೇಹದಲ್ಲಿ ಒಂದು ತುದಿಯಿಂದ ಇನ್ನೊಂದು ತುದಿಗೆ ಹರಿಯುತ್ತದೆ. ಇದು ಎರಡು ಮನಸ್ಸುಗಳ ತಮ್ಮ ಹೃದಯಗಳ ನಡುವೆ ಸಂಪರ್ಕ ಹೊಂದಿದೆ. ಈ ಶಕ್ತಿಯೇ ಕೈಕುಲುಕುವ ಮತ್ತು ಅಪ್ಪುಗೆಯ ಮೂಲಕ ವರ್ಗಾಯಿಸಲು ಅಲ್ಲದೇ ಕಾಶ್ಮಿಕ್ ಅನ್ನುವ ಶಕ್ತಿಯು ನಮ್ಮ ಬೆರಳಿನ ತುದಿಯಲ್ಲಿ ಸಂಗ್ರಹವಾಗುವದರಿಂದ ನಾವು ವಯಸ್ಸಾದವರ ಪಾದ ಮುಟ್ಟಿದಾಗ ಪಾದವನ್ನು ಮುಟ್ಟಿದವರಿಗೆ ವರ್ಗಾಯಿಸಲ್ಪಡುತ್ತದೆ. ಈ ರೀತಿಯಾಗಿಕೈಬೆರಳು, ಪಾದಗಳ ಬೆರಳುಗಳು, ಗ್ರಾಹಕ ಶಕ್ತಿ ನೀಡುತ್ತವೆ. ನಮ್ಮ ದೇಶದಲ್ಲಿ ಹಿರಿಯರ ಸಂಪಲ್ಪ, ಆಶೀರ್ವಾದ ಮೌಲ್ಯವಾದವುಗಳಾಗಿವೆ. ಪ್ರೀತಿ, ದೈವಿಕತೆ, ಉದಾತ್ತತೆಯಿಂದ ತುಂಬಿದ ಹೃದಯದಿಂದ ಹೊರಬರುವ ಶುಭಹಾರೈಕೆಗಳು ಅಗಾಧವಾದ ಶಕ್ತಿ ಹೊಂದಿವೆ. ನಮ್ರತೆ, ಗೌರವಗಳಿಂದ ನಮಸ್ಕರಿಸಿದಾಗ ಹಿರಿಯರು ಆಶೀರ್ವದಿಸಿ ಶುಭಕೋರುತ್ತಾರೆ. ಅದು ನಮ್ಮನ್ನು ಆವರಿಸಲು ಧನಾತ್ಮಕ ಶಕ್ತಿಯ ರೂಪದಲ್ಲಿ ಹರಿಯುತ್ತದೆ. ಹಿರಿಯರ, ಗುರುಗಳ, ಮಹತ್ವ ಬೀರುವ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳು ಈ ಅಂಶ ಎತ್ತಿ ತೋರಿಸುವ ಅನೇಕ ಕಥೆಗಳನ್ನು ಹೊಂದಿವೆ.ಮಕ್ಕಳಿಗೆ ತಂದೆತಾಯಿಯರು ಹಿರಿಯರ ಮಹತ್ವ, ಹಿರಿಯರಿಗೆ ಕೊಡುವ ಗೌರವ , ಗುರುಗಳಿಗೆ, ಶಿಕ್ಷಕರಿಗೆ ನೀಡುವ ಮರ್ಯಾದೆ, ಸ್ನೇಹಿತರ ಜೊತೆ ಒಳ್ಳೆಯ ಒಡನಾಟ, ಓದಿನ ಮಹತ್ವ ತಿಳಿಸಿ ಕೊಟ್ಟಾಗಲೇ ಮಕ್ಕಳು ಮುಂದೆ ಅವರ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುವದು.
14 Jun '24
1 ನಿಮಿಷದ ಓದು
ಪಾಲನೆ ಮತ್ತು ಕುಟುಂಬ
ಗುರು ಹಿರಿಯರ ಭಕ್ತಿ
ಬಡವರ ಮನೆ ಊಟ ಚಂದ ಸಿರಿವಂತರ ಮನೆ ನೋಟ ಚಂದ
ಬಡವರ ಮನೆ ಊಟ ಚಂದ ಸಿರಿವಂತರ ಮನೆ ನೋಟ ಚಂದ **************************ಎಲ್ಲರಿಗೂ ಗೊತ್ತಿರುವ ಹಾಗೆ ಆರ್ಥಿಕ ಸಬಲತೆ ಇಲ್ಲದವರನ್ನು ಬಡವರು ಎಂದು ಕರೆಯುತ್ತಾರೆ. ಮೂಲಭೂತ ಸೌಕರ್ಯಗಳಾದ ರೋಟಿ - ಬಟ್ಟೆ - ತಿಂಡಿ -ಊಟ ಇದೆಲ್ಲ ಕನಿಷ್ಠ ಸೌಲಭ್ಯಗಳಿಂದ ವಂಚಿತರಾದ ದುರದೃಷ್ಟವಂತರನ್ನು ಬಡವರು ಎನ್ನಬಹುದು. ಎಷ್ಟೋ ಜನ ಹುಟ್ಟುವಾಗಲೇ ಬಡತನದ ಜೊತೆ ಹುಟ್ಟಿರಬಹುದು. ಅದು ಅವರ ತಪ್ಪಲ್ಲ.. ಆದರೆ ಅದನ್ನೇ ಹಾಸು ಹೊದ್ದು ಮಲಗಿ ಕೊನೆಗೆ ಬಡತನದಲ್ಲೇ ಆರಡಿ ಮೂರಡಿ ಜಾಗ ಸೇರಿದರೆ ಖಂಡಿತಾ ಸ್ವಯಂಕೃತವೇ ಹೌದು!ಹಣದ ಸಿರಿವಂತಿಕೆಗಿಂತ ಹೃದಯ ಶ್ರೀಮಂತಿಕೆ ಮುಖ್ಯ. ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು ಎಂಬ ಹಾಗೆ ಪರಸ್ಪರ ಹೊಂದಾಣಿಕೆ ಪ್ರೀತಿ ಇದ್ದರೆ ಬಡತನದಲ್ಲೂ ಸುಖ ಅರಸುತ್ತಾರೆ ಎಷ್ಟೋ ಮಂದಿ. ಫೈವ್ ಸ್ಟಾರ್ ಹೋಟೆಲ್ ನಲ್ಲಿ ಒಣ ರೊಟ್ಟಿ ಕಡಿಯುವವನು ಮನೆಯಲ್ಲಿ ಹದವಾಗಿ ಸುಟ್ಟ ಜೋಳದ ರೊಟ್ಟಿ ಎಣ್ಣೆಗಾಯಿ ತಿನ್ನುವವರನ್ನು ಬಡವ ಎಂದು ತಿಳಿದರೆ ಅವನಿಗಿಂತ ಮೂರ್ಖ ಮತ್ತೊಬ್ಬರಿಲ್ಲ . ಆಧುನಿಕ ಉಡುಪು ಧರಿಸಿ ಸುಳ್ಳು ಶ್ರೀಮಂತಿಕೆಯನ್ನು ಪ್ರದರ್ಶನ ಮಾಡುವ ಈಗಿನ ಯುವಪೀಳಿಗೆ ದೇಸಿ ವಸ್ತ್ರ ಧರಿಸಿ ಸಂಪ್ರದಾಯ ಪಾಲಿಸುವವರನ್ನು ಕಂಡು 'ಅಯ್ಯೋ ಪಾಪ ಜೀನ್ಸ್ ಖರೀದಿಸಲು ದುಡ್ಡಿಲ್ಲವೇನೋ ಎಂದು ತಿಳಿದರೆ ಅವರಿಗಿಂತ ಅನಾಗರಿಕರು ಇನ್ನೊಬ್ಬರಿಲ್ಲ ಈ ಜಗದೊಳಗೆ.ಅರಮನೆಯಂಥ ಮನೆಯಲ್ಲಿ ಒಬ್ಬರು ಮೂವರು ವಾಸಿಸುವವರು, ಕಾಂಪೌಂಡ್ ಬಳಿ ಮನುಷ್ಯರು ಸುಳಿಯದಂತೆ ನಾಯಿ ಕಟ್ಟಿ ಹೆದರಿಸುತ್ತ, ಚಿಕ್ಕದಾಗಿ ಚೊಕ್ಕವಾದ ಮನೆ ಕಟ್ಟಿ ಬಂಧು ಬಳಗ ನೆರೆಹೊರೆಯ ಸಂಪರ್ಕದಲ್ಲಿ, ಬೀದಿ ನಾಯಿಗಳಿಗೆ ಪ್ರೀತಿ ತೋರುತ್ತಾ ಸಮಾಜದಲ್ಲಿ ಬೆರೆಯುವವನನ್ನು ಕಂಡು ''ಪಾಪ ಮನೆ ಚಿಕ್ಕದು ಬಡವರು' ಎಂದುಕೊಂಡರೆ ಅವರ ಮನಸ್ಸು ಇನ್ನೆಷ್ಟು ಸಂಕುಚಿತವಾಗಿರಬಹುದು. 'ಬಡವರ ಮನೆ ಊಟ ಚೆಂದ ಸಿರಿವಂತರ ಮನೆ ನೋಟ ಚಂದ' ಎಂದು ಗಾದೆಯೇ ಇದೆಯಲ್ಲವೇ? ನಾವೆಲ್ಲಾ ಈ ನಾಗಾಲೋಟದ ಬದುಕಿನಲ್ಲಿ ಎಲ್ಲಾ ಇದ್ದು ಇನ್ನೇನೋ ಕಳೆದುಕೊಂಡು ಬಿಟ್ಟಿದ್ದೇವೆ. ಮನಸ್ಸು ಬಿಚ್ಚಿ ನಗಲು ಸಂಭ್ರಮಿಸಲೂ ನಾಗರಿಕತೆಯ ಮುಖವಾಡದ ಬದುಕು. ಜೇಬು ತುಂಬಿದರೇನು ಬಂತು. ಮನಸ್ಸೋ ಖಾಲಿ ಖಾಲಿ, ಬಾಯಿ ತುಂಬಾ ಮಾತನಾಡಲು ಬಿಗುಮಾನ, ಕೇಕೆ ಹಾಕುತ್ತಾ ನಗುವವರನ್ನು ಕಂಡರೆ ಹೊಟ್ಟೆ ಹುರಿ.ಇಂದಿನ ದಿನ ಹಣದ ವ್ಯಾಮೋಹಕ್ಕೆ ಬಲಿಯಾಗಿ ಮನೆ ಮಂದಿಯೆಲ್ಲಾ ದುಡಿಯುವ ಜನ ಒಟ್ಟಿಗೆ ಕುಳಿತು ಮನೆಯಲ್ಲಿ ಸಹಭೋಜನ ಮಾಡಲು ಸಮಯವಿಲ್ಲದೆ ಅವರವರ ಊಟ ಅವರೇ ಬಡಿಸಿಕೊಂಡು ತಿನ್ನುವ ಪರಿಸ್ಥಿತಿ ಬಂದಿದೆ. ಇಂಥ ಸಿರಿವಂತಿಕೆ ಇದ್ದರೆಷ್ಟು ಬಿಟ್ಟರೆಷ್ಟು? ಮನೆ ಮಂದಿಯೆಲ್ಲಾ ಒಟ್ಟಾಗಿ ನೆಲದ ಮೇಲೆ ಕುಳಿತು ಒಬ್ಬರಿಗೊಬ್ಬರು ಹಾಸ್ಯ ಮಾಡುತ್ತಾ, ಉಪಚರಿಸುತ್ತಾ ಮುದ್ದೆ ಬಸ್ಸಾರು ತಿಂದರೂ ಕೂಡ ಅಮೃತವಲ್ಲವೇ?ಸೋಶಿಯಲ್ ಮೀಡಿಯಾದಲ್ಲಿ ದಿನಾಂಕ ನೋಡಿ ಜೊತೆಗೆ ವಾಸಿಸುವ ಮನೆಯ ಸದಸ್ಯರಿಗೆ ಸಂಜೆಯ ಹೊತ್ತಿಗೆ ವಾಟ್ಸಾಪ್ ನಲ್ಲಿ ಕಾಟಾಚಾರಕ್ಕೆಂಬಂತೆ ಒಂದು ಶುಭಾಶಯ ಕೋರಿ ಕೇಕ್ ಕಟ್ ಮಾಡಿ ಅದನ್ನು ತಿನ್ನದೆ ಮುಖಕ್ಕೆ ಬಳಿದುಕೊಂಡು ಸಂಭ್ರಮಿಸುವ ವಿಕೃತ ಮನಸ್ಸಿನವರನ್ನು ಸಿರಿವಂತ ಎಂದು ತಿಳಿದರೆ ಖಂಡಿತಾ ನಗು ಬರುವುದಲ್ಲವೇ? ಒಂದು ಹಿಡಿ ಅನ್ನ ತಿಂದು ಅದನ್ನು ಕರಗಿಸಲು ನೂರಾರು ಕಸರತ್ತು ಮಾಡುತ್ತಾ ಸುಪ್ಪತ್ತಿಗೆ ಮೇಲೆ ಮಲಗಿದರೂ ನಿದ್ದೆ ಬರದೇ ಹೋರಳಾಡುತ್ತಾ ಬೆಳಿಗ್ಗೆ ಎದ್ದು ಜಾಗ್ಗಿನಿಂಗ್ ಓಡುವ ಮಂದಿ. ಇವರು ಶ್ರೀಮಂತರು ನೋಡಿ ಅವರ ಮನೆ ನೋಟ ಚಂದ. ಇದಕ್ಕಲ್ಲವೇ ನೋಟ ಚಂದವಾಗಿ ಕಾಣುವುದು.ಗಾರೆ ಕೆಲಸ ಮಾಡುವ ಕೂಲಿ ಕಾರ್ಮಿಕರನ್ನು ಗಮನಿಸಿದರೆ ತಿಳಿಯುವುದು ಎಂಥ ಶ್ರಮ ಜೀವಿಗಳು ಅವರೆಲ್ಲ ಅನ್ನಿಸದೆ ಇರಲ್ಲ. ತಿಂದಿದ್ದೆಲ್ಲಾ ಸ್ವಾಭಾವಿಕವಾಗಿ ಕರಗಿ ಅವರೆಲ್ಲಾ ಗಟ್ಟಿಮುಟ್ಟಾಗಿರುತ್ತಾರೆ. ಸ್ಕೂಟಿ ಇದ್ದವನು ಬಡವ, ಬಿಎಂಡಬ್ಲ್ಯೂ ಕಾರಿದ್ದವನು ಶ್ರೀಮಂತ ಖಂಡಿತಾ ಇಲ್ಲ! ಯಾರನ್ನು ಬಡವರೆಂದು ಭಾವಿಸಿರುತ್ತೇವೋ ಅವರಿಗಿರುವ ಸಹೃದಯತೆ, ವಿಶಾಲ ಮನೋಭಾವ, ಹಂಚಿ ತಿನ್ನುವ ಗುಣ, ಈ ಸೋ ಕಾಲ್ಡ್ ಶ್ರೀಮಂತರಿಗೆ ಇರುವುದಿಲ್ಲ. ಶ್ರೀಮಂತರ ಮನೆ ಮಾತ್ರ ನೋಡಲು ಅನುಕೂಲವಾಗಿ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಆದರೆ ಬಡವರ ಮನೆಯ ಊಟ ಗಂಜಿಯಾದರೂ ಸರಿ ಅದು ಅಮೃತಕ್ಕೆ ಸಮ.✍️ ಪುಷ್ಪ ಪ್ರಸಾದ್ ಉಡುಪಿ
14 Jun '24
2 ನಿಮಿಷದ ಓದು
ಬಡವರ ಮನೆ ಊಟ ಚಂದ ಸಿರಿವಂತರ ಮನೆ ನೋಟ ಚಂದ

ಸಾಮಾಜಿಕ ಮಾಧ್ಯಮಗಳಲ್ಲಿ ಫಾಲೋ ಮಾಡಿ